Saturday, May 3, 2008

ವಿಸ್ಮೃತಿಯಲ್ಲಿ ಆಧುನಿಕತೆ ಮುರಿಯಲೆತ್ನಿಸುವ ‘ಉಷಾಹರಣ’

ನೂರೈವತ್ತು ವರ್ಷಗಳ ಹಿಂದೆ ರಚಿತವಾದ ನಾಟಕವನ್ನು ಇಂದು ಹೇಗೆ ಪ್ರಸ್ತುತಪಡಿಸಬಹುದು?
ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಶೇಷಗಿರಿ ಎಂಬ ಹಳ್ಳಿಯ ಶೇಷಗಿರಿ ಕಲಾ ತಂಡ ಸಿದ್ಧಪಡಿಸಿರುವ ಶಾಂತ ಕವಿಗಳ ‘ಉಷಾಹರಣ’ ಎಂಬ ನಾಟಕ ಇದಕ್ಕೆ ಒಂದು ಉತ್ತಮ ನಿದರ್ಶನ.
ಮೇ ೧, ೨೦೦೮ರಂದು ಶಿವಮೊಗ್ಗದ ಕುವೆಂಪು ರಂಗಮಂದಿರದಲ್ಲಿ ಈ ನಾಟಕವನ್ನು ಸ್ಥಳೀಯ ಸಮುದಾಯ ತಂಡವು ಆಯೋಜಿಸಿತ್ತು.
ಶಿವಮೊಗ್ಗದ ಪ್ರೇಕ್ಷಕರು ಕೆಲ ದಿನಗಳ ಹಿಂದೆ ಇದೇ ಕಥೆಯನ್ನು ಹೊಂದಿದ್ದ ಮಹಿಳೆಯರೇ ಅಭಿನಯಿಸಿದ ‘ಉಷಾಪರಿಣಯ’ ಯಕ್ಷಗಾನ ಪ್ರಸಂಗವನ್ನು ನೋಡಿದ್ದರು. ಹಾಗಾಗಿ ಉಷಾಹರಣ ಕುತೂಹಲವನ್ನೂ ಕೆರಳಿಸಿತ್ತು.
ಉಷಾಹರಣ ನಾಟಕದಲ್ಲೂ ಸಹ ಯಕ್ಷಗಾನದ ಛಾಯೆ ಇದೆ. ನಿರ್ದೇಶಕ ಶ್ರೀಪಾದ ಭಟ್ ಅವರು ಸ್ವತಃ ಯಕ್ಷಗಾನ ಕಲಾವಿದರು. ಪಾತ್ರಗಳ ಆಗಮನ, ನಿರ್ಗಮನ, ಆಂಗೀಕಾಭಿನಯದಲ್ಲಿ ಯಕ್ಷಗಾನದ ಛಾಪು ಎದ್ದುಕಾಣುತ್ತಿತ್ತು.
ಬಾಣಾಸುರ ರಾಜನ ಮಗಳು ಉಷಾ ಕನಸಿನಲ್ಲಿ ಕಂಡ ಕೃಷ್ಣನ ಪುತ್ರ ಅನಿರುದ್ಧನನ್ನು ಮೋಹಿಸುತ್ತಾಳೆ. ಸಖಿ ಚಿತ್ರಲೇಖೆಯ ಸಹಾಯದಿಂದ ಆತನನ್ನು ತನ್ನ ಮಂದಿರಕ್ಕೆ ಕರೆತರುತ್ತಾಳೆ. ನಂತರ ಆಕೆ ಗರ್ಭಿಣಿಯಾದ ವಿಷಯ ಬಾಣಾಸುರನಿಗೆ ತಿಳಿದು ಅನಿರುದ್ಧನನ್ನು ಬಂಧಿಸುತ್ತಾನೆ. ವಿಷಯ ತಿಳಿದ ಕೃಷ್ಣ ಬಾಣಾಸುರನೊಂದಿಗೆ ಯುದ್ಧ ಮಾಡಿ ಆತನ ಬಾಹುಗಳನ್ನು ಕತ್ತರಿಸುತ್ತಾನೆ. ಕೊನೆಗೆ ಸುಖಾಂತ್ಯ. ಇಬ್ಬರ ಮದುವೆಯಾಗುತ್ತದೆ.
ಯುದ್ಧ ವಿರೋಧಿ ನಿಲುವು ಈ ನಾಟಕದಲ್ಲಿ ಕಾಣಸಿಗುವುದು ಬಾಣಾಸುರ ಕೃಷ್ಣರ ಸಂಘರ್ಷದಲ್ಲಿ ಮಾತ್ರ. ಬಾಣಾಸುರ ಆಯುಧಗಳಲ್ಲಿ ಬಂದೂಕೂ ಇದ್ದುದು ವಿಶೇಷ. ಆದರೆ ನಾಟಕ ನಿಜ ದ್ವನಿ ಇರುವುದು ಉಷಾ-ಅನಿರುದ್ಧರ ವಿರಹ-ಪ್ರೇಮ ದೃಶ್ಯಗಳಲ್ಲಿ.
ನಾಟಕದ ಇನ್ನೊಂದು ಗಮನಾರ್ಹ ಅಂಶ ಸಂಗೀತ. ಹಿಂದೂಸ್ತಾನಿ ಆಲಾಪಗಳು ಕೆಲವೊಮ್ಮೆ ರಂಗದ ಮೇಲಿನ ಚಟುವಟಿಕೆಯನ್ನೂ ಮೀರಿದರೂ ಸಹ ವೈಭವದ ಕಂಪವಿ ನಾಟಕದ ದಿನಗಳನ್ನು ನೆನಪಿಸಿತು. ಚಂಡೆಯ ಅಪಶೃತಿ ಕೆಲವೊಮ್ಮೆ ಕಿರಿಕಿರಿ ಮಾಡುತ್ತಿತ್ತು. ಗ್ರಾಮೀಣ ಮೂಲದಿಂದಲೇ ಬಂದ ಹಲವು ನಟರು ಅಚ್ಚುಕಟ್ಟಾಗಿ ಅಭಿನಯಿಸಿದರು.

ಶತಮಾನಗಳ ಹಿಂದಿನ ಈ ನಾಟಕ ವಿಳಂಬಿತ ಶೈಲಿಯಲ್ಲಿದೆ. ಅದನ್ನು ಅದೇ ರೀತಿ ನಿರ್ದೇಶಕರು ರಂಗದ ಮೇಲೆ ತಂದಿದ್ದಾರೆ. ‘ಆಧುನಿಕತೆಯನ್ನು ಮುರಿದು ಕಟ್ಟುವ’ ಹುಮ್ಮಸ್ಸಿನ ನಿರ್ದೇಶಕರು ಇದಕ್ಕಾಗಿ ಯಕ್ಷಗಾನದ ಸಹಕಾರ ಪಡೆದಿದ್ದಾರೆ. ಮರಳಿ ಬೇರಿನಡೆಗೆ ಸಾಗುವ ಯತ್ನದಲ್ಲಿ ತಕ್ಕಮಟ್ಟಿಗೆ ಯಶಸ್ವಿಯೂ ಆಗಿದ್ದಾರೆ. ಕೆಲವು ರಂಗ ಪರಿಕರಗಳು ಬಿ.ವಿ. ಕಾರಂತರ ನಾಟಕಗಳನ್ನು ನೆನಪಿಸುತ್ತಿದ್ದವು. ಬಳಸುವಲ್ಲಿ ನಿರ್ದೇಶಕರ ಸ್ವಂತಿಕೆ ಇತ್ತು.ಆದರೆ, ಎಲ್ಲ ಸಂದರ್ಭದಲ್ಲೂ ವಿಸ್ಮೃತಿಯೇ ಆಧುನಿಕತೆಗೆ ಉತ್ತರವೇ ಎನ್ನುವ ಪ್ರಶ್ನೆ ಹಾಗೇ ಉಳಿಯುತ್ತದೆ.

Thursday, March 27, 2008

ವಿಶ್ವ ರಂಗಭೂಮಿ ದಿನಾಚರಣೆ

ಶಿವಮೊಗ್ಗದಲ್ಲಿ ಕಲಾವಿದರ ಒಕ್ಕೂಟ ಏರ್ಪಡಿಸಿದ್ದ ವಿಶ್ವ ರಂಗಭೂಮಿ ದಿನ ಕಾರ್ಯಕ್ರಮದಲ್ಲಿ ರಂಗಪ್ರೇಮಿಗಳ ಸಂಭ್ರಮ.

Wednesday, March 12, 2008

ಬಹುವ್ಯಾಪಿ, ಬಹುರೂಪಿ: ರಂಗಸಹ್ಯಾದ್ರಿ

ಇದೊಂದು ಅಪರೂಪದ ಕಾರ್ಯಕ್ರಮ.
ನಾಟಕೋತ್ಸವ ಎಂದರೆ ೪-೫ ನಾಟಕಗಳು, ಒಂದು ವೇದಿಕೆ ಎಂಬ ಪರಿಕಲ್ಪನೆಯೇ ರೂಡಿಯಲ್ಲಿದೆ. ಆದರೆ ಸಹ್ಯಾದ್ರಿ ಉತ್ಸವ-೦೮ ಅಂಗವಾಗಿ ಜಿಲ್ಲಾಡಳಿತ ಏರ್ಪಡಿಸಿದ ‘ರಂಗ ಸಹ್ಯಾದ್ರಿ’ ಈ ಸಂಪ್ರದಾಯವನ್ನು ಮೀರಿ ಹೊಸ ಸಾಧ್ಯತೆಗಳನ್ನು ತೋರಿಸಿಕೊಟ್ಟಿದೆ.
೧೦ ದಿನ-೨೩ ನಾಟಕ-೨೪ ಪ್ರದರ್ಶನ-೭ ವೇದಿಕೆ; ಇದು ರಂಗಸಹ್ಯಾದ್ರಿಯ ವಿಶ್ವರೂಪ. ಈ ಏಳು ವೇದಿಕೆಗಳು ಶಿವಮೊಗ್ಗ ನಗರ ಮಾತ್ರವಲ್ಲ, ಜಿಲ್ಲೆಯ ಎಲ್ಲ ತಾಲೂಕು ಕೇಂದ್ರಗಳಲ್ಲಿವೆ. ರಂಗೋತ್ಸವವು ನಗರಕ್ಕೆ ಮಾತ್ರ ಸೀಮಿತವಾಗದೆ ಗ್ರಾಮೀಣರನ್ನೂ ತಲುಪಿರುವುದು ವಿಶೇಷ.
ಕಾರ್ಯಕ್ರಮವು ೨೦೦೮ರ ಫೆಬ್ರವರಿ ೧ರಿಂದ ೧೦ನೇ ತಾರೀಖಿನ ವರೆಗೆ ನಡೆಯಿತು.
ನಾಟಕಗಳ ಆಯ್ಕೆಯೂ ವೈವಿದ್ಯಮಯ. ರೆಪರ್ಟರಿ, ಹವ್ಯಾಸಿ ತಂಡಗಳು ಮಾತ್ರವಲ್ಲದೆ ವೃತ್ತಿರಂಗಭೂಮಿಯ ತಂಡಕ್ಕೂ ಅವಕಾಶ ನೀಡಲಾಗಿದೆ. ಎರಡು ಹೊಸ ನಾಟಕಗಳು ಪ್ರದರ್ಶನ ಕಂಡಿವೆ. ಇನ್ನೊಂದು ಗಮನಿಸಬೇಕಾದ ವಿಷಯವೆಂದರೆ ಉತ್ಸವದಲ್ಲಿ ಪಾಲ್ಗೊಳ್ಳುವ ಜಿಲ್ಲೆಯ ಹೊರಗಿನ ತಂಡಗಳು ೬ ಮಾತ್ರ. ಇಳಿದ ೧೭ ತಂಡಗಳು ಶಿವಮೊಗ್ಗ ಜಿಲ್ಲೆಯವೇ, ಅದರಲ್ಲಿ ೯ ತಂಡಗಳು ಶಿವಮೊಗ್ಗ ನಗರದಲ್ಲಿ ಸಕ್ರಿಯ.
ಅತಿ ಹೆಚ್ಚು ಸ್ಥಳೀಯ ತಂಡಗಳಿಗೆ ಅವಕಾಶ, ರಂಗತಂಡಗಳೇ ಇರದ ತಾಲೂಕಿನಲ್ಲಿಯೂ ನಾಟಕ ಪ್ರದರ್ಶನಕ್ಕೆ ಅವಕಾಶ ನೀಡುವ ಮೂಲಕ ರಂಗನಿರಂತರತೆಗೆ ‘ರಂಗ ಸಹ್ಯಾದ್ರಿ’ ಹೊಸ ಹೊಳಪನ್ನು ನೀಡಿದೆ.
ಬಿ.ವಿ. ಕಾರಂತರ ಮರೆಯಲಾಗದ ಸಂಗೀತ-ಲಾಲಿತ್ಯ ಹೊಂದಿರುವ ‘ಗೋಕುಲ ನಿರ್ಗಮನ’, ತಾಂತ್ರಿಕತೆಯಲ್ಲಿ ಔನ್ನತ್ಯ ಮೆರೆದಿರುವ ಗಿರೀಶ್ ಕಾರ್ನಾಡರ ‘ಒಡಕಲು ಬಿಂಬ’, ವೃತ್ತಿ ರಂಗಭೂಮಿಯ ಮೇರು ರಂಗಕೃತಿ ‘ರಕ್ತರಾತ್ರಿ’ ಉತ್ಸವದ ಬಹುಮುಖತೆಯನ್ನು ಸಾರುತ್ತವೆ. ಕನ್ನಡದ ಮೂವರು ಪ್ರಮುಖ ಲೇಖಕರ ಬದುಕು-ಬರಹಗಳನ್ನಾಧರಿಸಿದ ಮೂರು ನಾಟಕಗಳಿದ್ದುದು ವಿಶೇಷ. ಎಂದೆಂದೂ ಮುಗಿಯದ ಕಥೆ (ಪ್ರೆ ಯು.ಆರ್. ಅನಂತಮೂರ್ತಿ), ಬೀಚಿ ಬುಲೆಟ್ಸ್ (ಬೀಚಿ), ಮೈಸೂರು ಮಲ್ಲಿಗೆ (ಕೆ.ಎಸ್. ನರಸಿಂಹಸ್ವಾಮಿ) ನಾಟಕಗಳು ಉತ್ಸವಕ್ಕೆ ಮೆರಗು ನೀಡಿದವು.
ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ತುಮರಿಯ ಕಿನ್ನರ ಮೇಳ ತಂಡದ ವಿಶೇಷ ಪ್ರಯೋಗ ಗಮನ ಸೆಳೆದಿದೆ. ಷೇಕ್‌ಸ್ಪಿಯರ್ ಮಹಾಕವಿಯ ‘ಟೆಂಪೆಸ್ಟ್’ ನಾಟಕದ ಎರಡು ರಂಗರೂಪಗಳನ್ನು ಒಂದೇ ತಂಡದ ಅದೇ ಕಲಾವಿದರು ತಿರುಗಾಟಕ್ಕೆ ಸಿದ್ಧಪಡಿಸಿದ್ದರು. ಮಕ್ಕಳಿಗಾಗಿ ರಂಜನೆಗೆ ಒತ್ತು ನೀಡುವ ವೈದೇಹಿ ಅವರ ‘ಧಾಂಧೂಂ ಸುಂಟರಗಾಳಿ’ (ನಿರ್ದೇಶನ: ಕೆ.ಜಿ. ಕೃಷ್ಣಮೂರ್ತಿ), ಗಂಭೀರ ಪ್ರೇಕ್ಷಕರಿಗಾಗಿ ರಾಮಚಂದ್ರದೇವ ಅನುವಾದಿಸಿರುವ ‘ಝಂಝ ಮಾರುತ (ನಿರ್ದೇಶನ: ಸ್ಯಾಂಕುಟ್ಟಿ ಪಟ್ಟಾಂಕರಿ)’ ನಾಟಕಗಳು ಒಂದೇ ದಿನ ಮೂರು ಗಂಟೆ ಅಂತರದಲ್ಲಿ ಪ್ರದರ್ಶನಗೊಂಡವು. ಒಂದೇ ನಾಟಕದ ಎರಡು ರೂಪಗಳನ್ನು ಒಟ್ಟಿಗೆ ನೋಡುವ ಅಪರೂಪದ ಅವಕಾಶ ಈ ಉತ್ಸವದಲ್ಲಿ ಪ್ರೇಕ್ಷಕರಿಗೆ ಉತ್ತರ ದೊರೆತಿದೆ.
ಇದೇ ಮೊದಲ ಪ್ರದರ್ಶನವಾಗಿ ‘ಬಹುಪರಾಕ್’ ಹಾಗೂ ‘ಅಂಧಯುಗ’ ಈ ಉತ್ಸವದಲ್ಲಿ ರಂಗದ ಮೇಲೆ ಬಂದವು.
ಟಿಟಿಶ್ರೀಔ ಟಿಶ್ರೀಔತಾಲೂಕು ಕೇಂದ್ರಕ್ಕೆ
ಜಿಲ್ಲೆಯ ಎಲ್ಲ ತಾಲೂಕು ಕೇಂದ್ರಗಳಿಗೆ ಈ ಉತ್ಸವ ಹರಡಿಕೊಂಡಿತ್ತು. ಭದ್ರಾವತಿ, ಸಾಗರ, ತೀರ್ಥಹಳ್ಳಿ, ಹೊಸನಗರ, ಶಿಕಾರಿಪುರ, ಸೊರಬ ಪಟ್ಟಣಗಳಲ್ಲಿಯೂ ರಂಗಸಂಭ್ರಮ ಮನೆಮಾಡಿತ್ತು.
ಗ್ರೀಕ್ ನಾಟಕ ‘ಮ್ಯಾಕ್‌ಬೆತ್’, ಮೋಹನ್ ರಾಕೇಶರ ‘ಅಲೆಗಳಲ್ಲಿ ರಾಜಹಂಸಗಳು’, ವಿ.ಕೃ. ಗೋಕಾಕರ ‘ಜನನಾಯಕ’, ಪೂರ್ಣಚಂದ್ರ ತೇಜಸ್ವಿ ಅವರ ಕಥೆ ಆಧಾರಿತ ‘ಮಾಯಾಮೃಗ’, ಏಕವ್ಯಕ್ತಿ ರಂಗಪ್ರಯೋಗ ‘ವಿಕರ್ತ’, ಕೋಮುಸಾಮರಸ್ಯ ಸಾರುವ ‘ರಾವಿ ನಂದಿ ದಂಡೆಯಲ್ಲಿ’, ಅವಘಡಗಳ ನಗೆನಾಟಕ ‘ಶ್ರೀಕೃಷ್ಣ ಸಂಧಾನ’, ಐತಿಹಾಸಿಕ ‘ದುರ್ಗದ ದುರಂತ’, ಕುವೆಂಪು ವಿರಚಿತ ‘ಬೆರಳ್‌ಗೆ ಕೊರಳ್’, ಕುರುಕ್ಷೇತ್ರ ಯುದ್ಧದ ಕಥೆ ಹೊಂದಿದ ‘ವಸುದೈವ ಕುಟುಂಬಕಂ’, ದಾಸಪರಂಪರೆಯ ಶ್ರೇಷ್ಠತೆ ಸಾರುವ ‘ರಂಗ ಪುರಂದರ’, ಮಕ್ಕಳೇ ಅಭಿನಯಿಸಿದ ಮಕ್ಕಳ ನಾಟಕ ‘ಗೆಳೆಯ’, ನಗೆ ನಾಟಕ ‘ಹುಡುಕೋಣ ಬನ್ನಿ’ ಉತ್ಸವದಲ್ಲಿ ಪ್ರದರ್ಶನ ಕಂಡವು.
ನಾಟಕ ಪ್ರದರ್ಶನ ಮಾತ್ರವಲ್ಲದೆ ಫೆ.೩ರಂದು ‘ರಂಗಭೂಮಿಯ ಪುನರಾನ್ವೇಷಣೆ’ ಕುರಿತಂತೆ ನಡೆದ ವಿಚಾರ ಸಂಕಿರಣದಲ್ಲಿ ರಂಗ ನಿರ್ದೇಶಕ ನಟರಾಜ ಹೊನ್ನವಳ್ಳಿ, ನಾಟಕಕಾರ ಚಂದ್ರು ಪಿ. ಕಾಳೇನಹಳ್ಳಿ, ರಂಗನಿದೇಶಕ ವಸಂತ ಬನ್ನಾಡಿ ಭಾಗವಹಿಸಿದ್ದರು. ೯ ದಿನಗಳ ಕಾಲ ಪ್ರತಿದಿನ ಸಂಜೆ ೪ ಗಂಟೆಗೆ ನಡೆದ ರಂಗ ಕಾರ್ಯಾಗಾರದಲ್ಲಿ ವಿವಿಧ ವಿಷಯಗಳ ಬಗ್ಗೆ ಎಂ.ಎಂ. ಕೃಷ್ಣಮೂರ್ತಿ, ವೆಂಕಟರಮಣ ಐತಾಳ, ಕೆ.ಜಿ. ಕೃಷ್ಣಮೂರ್ತಿ, ನಟರಾಜ ಹೊನ್ನವಳ್ಳಿ, ಪುರುಷೋತ್ತಮ ತಲವಾಟ, ಗಣಪತಿ ಹೆಗಡೆ, ಪ್ರಸನ್ನ, ಗುರುಮೂರ್ತಿ ವರದಾಮೂಲ, ಕೇಶವಶರ್ಮ ಅವರು ಸಂವಾದ ಪ್ರಾತ್ಯಕ್ಷಿಕೆ ನಡೆಸಿಕೊಟ್ಟರು. ಫೆ. ೫ರಂದು ಮಕ್ಕಳ ನಾಟಕಗಳ ಮೂರು ಪ್ರದರ್ಶನ-ಸಂವಾದ ವಿಶೇಷ ಕಾರ್ಯಕ್ರಮ ನಡೆಯಿತು.
ಹಲವು ವೈವಿದ್ಯಗಳಿಂದ ಕೂಡಿರುವ ‘ರಂಗ ಸಹ್ಯಾದ್ರಿ’ ಉತ್ಸವವು ಜಿಲ್ಲೆಯ ರಂಗಚಟುವಟಿಕೆಗೆ ಹೊಸ ಟಾನಿಕ್ ನೀಡಿತು.


ಹೊನ್ನಾಳಿ ಚಂದ್ರೇಶೇಖರ್
ಸಂಚಾಲಕರು,
ರಂಗ ಸಹ್ಯಾದ್ರಿ ನಾಟಕೋತ್ಸವ

Tuesday, September 11, 2007

ಸಂಕೇತಗಳ ಭಾರಕ್ಕೆ ಕುಸಿಯದ ಮೀಡಿಯಾ


ಜಾಗತೀಕರಣಕ್ಕೆ ಸಂವಾದಿಯಾಗಿ ನಾಟಕವೊಂದು ನಿಲ್ಲಬಹುದೇ? ಇದಕ್ಕುತ್ತರ ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕು ತುಮರಿಯ ಕಿನ್ನರಮೇಳ ತಂಡ ಸಿದ್ಧಪಡಿಸಿರುವ ಯೂರಿಪಿಡೀಸ್‌ನ ‘ಮೀಡಿಯಾ’ ನಾಟಕದಲ್ಲಿದೆ.
ಜಾಗತೀಕರಣಕ್ಕೆ ಮುಖಾಮುಖಿಯಾಗಿ ಹಲವು ರಂಗಕೃತಿಗಳು ಬಂದುಹೋಗಿವೆ. ಇದಕ್ಕಾಗಿ ಹಲವು ಹೊಸ ಕೃತಿಗಳೂ ರಚನೆಯಾಗಿವೆ. ಆದರೆ ‘ಮೀಡಿಯಾ’ ನಾಟಕ ಉದಾರಿಕರಣದ ಪರಿಣಾಮಗಳ ಅತ್ಯಂತ ತುರ್ತು ಅಭಿವ್ಯಕ್ತಿಯಾಗಿ ಮೂಡಿಬಂದಿದೆ. ಗ್ರೀಕ್ ನಾಟಕಕಾರ ಯುರಿಪಿಡೀಸ್‌ನ ‘ಮೀಡಿಯಾ’ ರಂಗಭೂಮಿಯಲ್ಲಿ ಎಂದಿನಿಂದಲೂ ಬಹು ಚರ್ಚಿತ ನಾಟಕ. ಹಲವು ಸವಾಲುಗಳನ್ನು ಹೊಂದಿರುವ ಈ ಕೃತಿಯನ್ನು ಯಶಸ್ವಿಯಾಗಿ ರಂಗದ ಮೇಲೆ ತಂದ ತಂಡಗಳು ಕೆಲವೇ ಕೆಲವು. ಕನ್ನಡ ರಂಗಭೂಮಿಯಲ್ಲಂತೂ ಬೆರಳೆಣಿಕೆಯಷ್ಟು ಯಶಸ್ವಿ ಪ್ರದರ್ಶನಗಳಿವೆ.
ಹಿಂದೊಮ್ಮೆ ನೀನಾಸಂ ತಿರುಗಾಟಕ್ಕಾಗಿ ಬಿ.ವಿ. ಕಾರಂತರು ನಿರ್ದೇಶಿಸಿದ ಈ ನಾಟಕ ಕಾರಂತರ ಸಹಜ ಲಾಲಿತ್ಯವನ್ನೊಳಗೊಂಡು ಯಶಸ್ವಿ ಪ್ರದರ್ಶನವೆನಿಸಿತ್ತು. ಈಗ ತುಮರಿಯ ಕಿನ್ನರಮೇಳ ತಂಡವು ಈ ಕೃತಿಯ ಡಾ ಕೆ. ಮರುಳಸಿದ್ಧಪ್ಪನವರ ಅನುವಾದವನ್ನು ರಂಗದ ಮೇಲೆ ತಂದಿದೆ.
ಶಿವಮೊಗ್ಗದಲ್ಲಿ ಆಗಸ್ಟ್ ೨೨, ೨೦೦೭ರಂದು ಸಹ್ಯಾದ್ರಿ ರಂಗತರಂಗ ತಂಡವು ಡಿವಿಎಸ್ ರಂಗಮಂದಿರದಲ್ಲಿ ಈ ನಾಟಕವನ್ನು ಆಯೋಜಿಸಿತ್ತು.
ಕಾರಂತರು ಈ ನಾಟಕ ನಿರ್ದೇಶಿಸಿದ ಕಾಲ, ಇಂದಿನ ಕಾಲದ ನಡುವೆ ಹಲವು ಸ್ಥಿತ್ಯಂತರಗಳಿವೆ. ಇಂದೂ ಸಹ ಪ್ರಸ್ತುತವಾಗುವಂತೆ ನಿರ್ದೇಶಿಸುವುದು ಹೊಸ ಸವಾಲು. ಅದನ್ನು ಕಿನ್ನರ ಮೇಳದ ತಂಡ ಸಾಮ್‌ಕುಟ್ಟಿ ಪಟ್ಟಾಂಕರಿ ಅವರ ನಿರ್ದೇಶನದಲ್ಲಿ ಯಶಸ್ವಿಯಾಗಿ ನಿರ್ವಹಿಸಿದೆ ಎನ್ನುವುದೇ ಈ ಪ್ರಯೋಗದ ವಿಶೇಷ.
ಭಾವೋದ್ವೇಗದ ಹೆಣ್ಣು ಮೀಡಿಯಾ ತನಗೆ ದ್ರೋಹವೆಸಗಿ ಮರುಮದುವೆ ಮಾಡಿಕೊಂಡ ಗಂಡ ಜೇಸನ್, ಆತನ ನವವಧು, ಹಾಗೂ ಅವಳ ತಂದೆ ಕ್ರೆಯಾನನ ಮೇಲೆ ಸೇಡು ತೀರಿಸಿಕೊಂಡಿದ್ದರ ಕಥೆ.
ಕ್ರೆಯಾನ್ ಪಾತ್ರಧಾರಿ (ಕೆ.ಜಿ. ಕೃಷ್ಣಮೂರ್ತಿ) ಸೂಟುಬೂಟು ಧರಿಸಿ ರಾಜನಂತೆ ರಂಗ ಮೇಲೆ ಬರುವುದು, ಮೀಡಿಯಾ ಮಕ್ಕಳಿಗೆ ಏಜಿಯಸ್ (ರಘುರಾಮ) ‘ಅಮೇರಿಕಾ ಧೀಕ್ಷೆ’ ನೀಡುವುದು, ಅದಕ್ಕಾಗಿ ಪೆಪ್ಸಿ ಬಾಟಲಿ ಬಳಸುವುದು, ದೂತ ‘ಮೀಡಿಯಾ....’ ಎಂದು ಕೂಗಿದಾಗ ಪತ್ರಕರ್ತರು, ಟೀವಿ ಪತ್ರಕರ್ತರು ರಂಗದ ಮೇಲೆ ಬರುವುದು.. ಇತ್ಯಾದಿ ಇಂಟರ್ಪ್ರಿಟೇಶನ್‌ಗಳು ನಾಟಕವನ್ನು ಇಂದಿನ ಕಾಲಕ್ಕೆ ತರುತ್ತದೆ.
ಮೀಡಿಯಾ ತನ್ನ ನೋವನ್ನು ಅಭಿವ್ಯಕ್ತಿಸುವಾಗ ಅದನ್ನು ಅಲಕ್ಷಿಸಿ ನಿಂತ ಕ್ರೆಯಾನ್ ಅವಳ ಮೇಲೆಯೇ ಅನುಮಾನ ಪಡುತ್ತಾನೆ. ಆಗ ಮೀಡಿಯಾ ರಾಜ್ಯವನ್ನು ಬಿಟ್ಟು ಹೊರಹೋಗಲು ನಿರ್ಧರಿಸುತ್ತಾಳೆ. ತನ್ನ ಮಕ್ಕಳ ಮೇಲೆ ಯಾವ ಕಷ್ಟವೂ ಬರದಿರಲಿ ಎಂದು ಅವರನ್ನೇ ಕೊಲ್ಲುತ್ತಾಳೆ. ಮೀಡಿಯಾಳ ಭಾವೋದ್ವೇಗ, ಆಕ್ರೋಶ, ಆತಂಕಗಳನ್ನು ಸುಶೀಲಾ ಕೆಳಮನೆ ಅತ್ಯಂತ ಸಮರ್ಥವಾಗಿ ಹಿಡಿದಿಟ್ಟರು.
ರಂಗಸಜ್ಜಿಕೆ ಸರಳವಾಗಿ ಕಂಡರೂ ಇದ್ದೊಂದೇ ಪುಟ್ಟ ವೇದಿಕೆಯನ್ನು ವಿವಿಧ ರೀತಿಯಲ್ಲಿ ಬಳಸಿಕೊಂಡ ರೀತಿ ಅದ್ಭುತ. ಪಾತ್ರಗಳ ಪ್ರವೇಶ, ನಿರ್ಗಮನ ಸಂದರ್ಭದಲ್ಲಿ ಸಂಯೋಜಿಸಿದ ನೃತ್ಯ-ಸಂಗೀತ ರಂಗಕ್ಕೆ ತಕ್ಕಂಥ ವಾತಾವರಣ ನಿರ್ಮಿಸಿತು.
ಮೊದಲಿನಿಂದ ಕೊನೆಯ ವರೆಗೂ ಜಾಗತೀಕರಣದ ಸಂಕೇತಗಳು ರಂಗದ ಮೇಲೆ ಬರುತ್ತಲೇ ಇದ್ದವು. ಸಂಕೇತಗಳ ಭಾರಕ್ಕೆ ನಾಟಕ ಕುಸಿಯದೇ ಉಳಿದಿದ್ದೇ ಪ್ರಯೋಗದ ಸಾರ್ಥಕತೆಯಾಗಿತ್ತು.

Tuesday, May 15, 2007

ಪದ ಕೇಳಿ ಬಿಕ್ಷಾ ನೀಡವ್ವ.....

ಬುದ್ದಿ ಮಾತು ಹೇಳಿದರೆ ಕೇಳಬೇಕಮ್ಮ
ಮನ ಶುದ್ಧಳಾಗಿ ಗಂಡನೊಡನೆ ಬಾಳಬೇಕಮ್ಮ


ಹಾಡು ಕೇಳುತ್ತಿದ್ದಂತೆ ದಾಸಪ್ಪ ಬಂದ್ರು, ಏನಾದ್ರು ಇದ್ರೆ ನೀಡಮ್ಮ ಎಂದು ಮನೆಯ ಯಜಮಾನರು ಹೇಳುತ್ತಾರೆ. ಪರಿಚಯದ ನಗು ಬೀರುತ್ತಾ ಹೆಣ್ಣುಮಕ್ಕಳು ಕೊಟ್ಟಿದ್ದನ್ನು ತನ್ನ ಜೋಳಿಗೆಗೆ ಹಾಕಿಕೊಂಡು ದಾಸಪ್ಪ ಮುಂದಿನ ಮನೆಗೆ ಸಾಗುತ್ತಿದ್ದರು.
ಅಲ್ಲಿ ಮತ್ತೆ ಬೇರೆ ಹಾಡು,

ರಾಗಿ ತಂದೀರಾ
ಬಿಕ್ಷಕೆ ರಾಗಿ ತಂದೀರಾ


ಹೀಗೆ ಸಾಗುತ್ತದೆ ದಾಸಪ್ಪನ ದಿನಚರಿ.
ಈಗ ಯೌವನದಲ್ಲಿರುವ ನಮ್ಮೂರು ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕಿನ ಬಹುತೇಕ ಎಲ್ಲರೂ ಈ ದಾಸಪ್ಪನ ಹಾಡುಗಳನ್ನು ತಿಂಗಳಿಗೊಮ್ಮೆ ಕೇಳುತ್ತಲೇ ಬೆಳೆದಿದ್ದಾರೆ. ದೇಹದ ಶಕ್ತಿಯಲ್ಲಿ ಸ್ವಲ್ಪ ಕುಂದಿದ್ದರೂ ಹಾಡುಗಳ ಶಕ್ತಿ ಇಳಿದಿಲ್ಲ. ದಾಸಪ್ಪ ಬಂದಾಗಲೊಮ್ಮೆ ಹಾಡನ್ನು ಕೇಳಿ ಮನೆಯಲ್ಲಿದ್ದನ್ನು ನೀಡಿ ಬೀಳ್ಕೊಡುವರೇ ಎಲ್ಲರು. ಹೊನ್ನಾಳಿಗರ ಬಾಯಲ್ಲಿ ‘ಪೀಯ್ಯಂಪೆಟ್ಟಿಗಿ’ ಅಂತಲೇ ಕರೆಸಿಕೊಳ್ಳುವ ನಾದದ ಅಕ್ಷಯಪಾತ್ರೆ ಹಾರ್‍ಮೋನಿಯಂ ಹಿಡಿದು ಊರೆಲ್ಲಾ ಸುತ್ತಿ ಬರುವ ಈ ದಾಸಪ್ಪ ಯಾರು ಅಂತ ಪ್ರಶ್ನೆ ಕೇಳಿಕೊಂಡವರು ಯಾರು ಇಲ್ಲವೇ ಇಲ್ಲವೆನ್ನುವಷ್ಟು ಕಡಿಮೆ.
ದಾಸಪ್ಪ ಬರೀ ದಾಸಪ್ಪನಲ್ಲ. ಎಲ್ಲರ ಬಾಯಲ್ಲಿ ದಾಸಪ್ಪನೆಂದು ಕರೆಸಿಕೊಂಡ ಇವರು ಒಂದು ಕಾಲದಲ್ಲಿ ಬಯಲುಸೀಮೆಯ ಖ್ಯಾತ ನಾಟಕ ಕಲಾವಿದ. ಹೊಸಕುಂದವಾಡದ ರಾಜರಾಜೇಶ್ವರಿ ನಾಟಕ ಮಂಡಳಿ ಎಂಬ ವೃತ್ತಿಪರ ನಾಟಕ ಕಂಪನಿಯ ವಿಜೃಂಬಣೆಯ ದಿನಗಳಲ್ಲಿ ತರತರದ ಪಾತ್ರ ನಿರ್ವಹಿಸಿ ಈಗ ಬೀದಿಗೆ ಬಿದ್ದಿರುವ ಈ ಕಲಾವಿದನ ನಿಜವಾದ ಹೆಸರು ಹನುಮಂತಪ್ಪ. ರಾಣೇಬೆನ್ನೂರು ಸಮೀಪದ ಹಳ್ಳೂರು ಸ್ವಸ್ಥಾನ. ನಿಜವಾದ ಹೆಸರು ಯಾರಿಗೂ ಪರಿಚಯವಿಲ್ಲ. ದಾಸಪ್ಪ ಅಂತಲೇ ಎಲ್ಲರ ಬಾಯಲ್ಲಿ.
ಜೀವನ ನಿರ್ವಹಣೆಗಾಗಿ ಬಿಕ್ಷುಕ ಪಾತ್ರ ದರಿಸಿದ್ದ ಈ ವ್ಯಕ್ತಿ ತನ್ನ ನಾಟಕದ ದಿನಗಳ ನೆನಪನ್ನು ಮನೆಗಳ ಮುಂದೆ ಹಾಡುಗಳಾಗಿ ಹರಿಸುತ್ತಾ ಸಾಗುತ್ತಿದ್ದರು.
‘ಕಬೀರ, ತುಕಾರಾಮ, ಸುಲೋಚನಾ, ಮಹಾಭಾರತ, ಸೇರ್‍ದಂಗೆ ಬಾಳ ನಾಟಕ ಮಾಡಿದ್ವಿ ಬಿಡ್ರಿ. ಮೈಲಾರ, ಚಂದ್ರಗುತ್ತಿ, ಎಲ್ಲೇ ಜಾತ್ರಿ ನಡೀಲಿ ನಮ್ ಕಂಪ್ನಿ ಅಲ್ಲಿರ್‍ತಿತ್ತು. ಆ ಕಾಲನೇ ಬ್ಯಾರಿತ್ತು. ನಾಟಕದ ಹುಚ್ಚಿಗ್ ಬಿದ್ದು ಎಲ್ಲೆಂದ್ರಲ್ಲಿ ಸುತ್ತಾಡಿದ್ವಿ.’
ಕೂರಿಸಿಕೊಂಡು ಕೇಳಿದಾಗ ಹಾಡುಗಳಂತೆ ದಾಸಪ್ಪನ ಮಾತುಗಳೂ ಹರಿಯುತ್ತವೆ.
‘ರೇಣುಕ ರಾಜ ಅಂತ ಒಂದ್ ನಾಟ್ಕ ಮಾಡಿದ್ವಿ. ಏನ್ ಜನ ಮೆಚ್ಚಿದ್ರು ಅಂದ್ರೆ ಹೇಳಬಾರ್‍ದು ಬಿಡ್ರಿ. ಅದೆಲ್ಲಾ ಈಗೆಲ್ಲಿ? ಒಂದ್ ದಿನ ಕಂಪನಿ ಮುಚ್ಚೋತು. ಎಲ್ಲಾ ಬೀದಿಗೆ ಬಿದ್ವಿ. ಕಲ್ತ ಪದ ಮೈಗೆ ಅಂಟ್ಕಂಡೇ ಇದ್ವು. ಅದೇ ಈಗ ಹೊಟ್ಟೆಪಾಡಾಗೇತಿ.’
ನಿಟ್ಟುಸಿರು ಬಿಟ್ಟ ದಾಸಪ್ಪ ಮುಂದೆ ಸಾಗುತ್ತಾರೆ.
ನಾಟ್ಕದೋರಿಗೆ ಅದೇನೋ ದುಡ್ಡು ಕೊಡ್ತಾರಂತೆ ಸರ್ಕಾರದೋರು ಅಂತಾ ಈ ಕಲಾವಿದ ಬರೆಯದ ಅರ್ಜಿಗಳಿಲ್ಲ. ಕಾಣದ ಅಧಿಕಾರಿ ಇಲ್ಲ. ಆದರೂ...‘ಅವರ ಹತ್ರಾನೂ ಬಿಕ್ಷೆ ಕೇಳ್ದಂಗೇ ಆತು’ ಎನ್ನುತ್ತಾರೆ. ನಾಟಕ ರಂಗದ ಮೇಲೆ ಪರಮೇಶ್ವರನ ಪಾತ್ರ ಹಾಕಿ ಮೆರೆದ ಹನುಮಂತಪ್ಪ ಈಗ ದಾಸಪ್ಪ.
ಈಗ ಅದರ ಉಸಾಬರಿನೇ ಬೇಡ ಅಂತಾ ದಾಸಪ್ಪ ಹಾಡುತ್ತಾ ಮುಂದೆ ಸಾಗುತ್ತಾರೆ.

ಯಾರಿಗೆ ಯಾರುಂಟು ಎರವಿನ ಸಂಸಾರ
ನೀರ ಮೇಗಳ ಗುಳ್ಳೆ ನಿಜವಲ್ಲ ಹರಿಯೇ
ನಿಜವಲ್ಲ ಹರಿಯೇ


ದಾಸಪ್ಪನ ಈ ‘ಪೀಯ್ಯಂಪೆಟ್ಗಿ’ ಹಾಡುತ್ತಲೇ ಇತ್ತು. ಇವತ್ತು ಈ ದಾಸಪ್ಪ ಎಲ್ಲಿದ್ದಾರೆ? ಈಗಿನ ಹುಡುಗರು ನಮ್ಮೂರಲ್ಲಿ ಇವರ ಹಾಡುಗಳನ್ನು ಕೇಳಿದ್ದಾರೆಯೇ?.

Tuesday, May 8, 2007

ಗುಣಮುಖ


ಇದು ಪಿ. ಲಂಕೇಶ್ ಅವರ ಗುಣಮುಖ ನಾಟಕದ ಒಂದು ಫೋಟೊ.... ಶಿವಮೊಗ್ಗದಲ್ಲಿ ಪ್ರದರ್ಶನ ಕಂಡಿತು.

ಮತ್ತದೆ ಬೇಸರ...

ಅದೇ ಸಂಜೆ
ಅದೇ ಏಕಾಂತ...
ನಿನ್ನ ಜೊತೆ ಇಲ್ಲದೆ
ಮಾತಿಲ್ಲದೆ ಮನ ವಿಭ್ರಾಂತ....

ನಿಸ್ಸಾರರ ಈ ಕವನ ಓದಿದಾಗಲೆಲ್ಲಾ ಸಂಜೆಯೂ ಆಲ್ಲದ, ರಾತ್ರಿಯೂ ಅಲ್ಲದ ಆ ಸಮಯ ನೆನಪಿಗೆ ಬರುತ್ತದೆ. ಸೂರ್ಯ ಮುಳುಗಿದ ನಂತರದ, ರಾತ್ರಿ ಆವರಿಸುವ ಮೊದಲಿನ ಆ ಸಮಯ. ಅದೊಂದು ಹಗಲು ಅಲ್ಲದ, ರಾತ್ರಿಯೂ ಅಲ್ಲದ ವಿಚಿತ್ರ ಕಾಲ. ನೆನಪುಗಳು ನುಗ್ಗಿ ಬರುವ ಸಂಕ್ರಮಣ ಸಮಯ.

ಇದೇ ದಾಟಿಯ, ಹಿಂದಿಯ ಬಹು ಜನಪ್ರಿಯ.... ಫಿರ್ ವಹಿ ಶಾಮ್... ವಹಿ ಗಂ... ವಹಿ ತನಹಾಯಿ.... ಇದು ನಿಮ್ಮನ್ನು ಕಾಡಿರಬಹುದು. ನೆನಪಿಸಿಕೊಳ್ಳಿ....