Tuesday, May 15, 2007

ಪದ ಕೇಳಿ ಬಿಕ್ಷಾ ನೀಡವ್ವ.....

ಬುದ್ದಿ ಮಾತು ಹೇಳಿದರೆ ಕೇಳಬೇಕಮ್ಮ
ಮನ ಶುದ್ಧಳಾಗಿ ಗಂಡನೊಡನೆ ಬಾಳಬೇಕಮ್ಮ


ಹಾಡು ಕೇಳುತ್ತಿದ್ದಂತೆ ದಾಸಪ್ಪ ಬಂದ್ರು, ಏನಾದ್ರು ಇದ್ರೆ ನೀಡಮ್ಮ ಎಂದು ಮನೆಯ ಯಜಮಾನರು ಹೇಳುತ್ತಾರೆ. ಪರಿಚಯದ ನಗು ಬೀರುತ್ತಾ ಹೆಣ್ಣುಮಕ್ಕಳು ಕೊಟ್ಟಿದ್ದನ್ನು ತನ್ನ ಜೋಳಿಗೆಗೆ ಹಾಕಿಕೊಂಡು ದಾಸಪ್ಪ ಮುಂದಿನ ಮನೆಗೆ ಸಾಗುತ್ತಿದ್ದರು.
ಅಲ್ಲಿ ಮತ್ತೆ ಬೇರೆ ಹಾಡು,

ರಾಗಿ ತಂದೀರಾ
ಬಿಕ್ಷಕೆ ರಾಗಿ ತಂದೀರಾ


ಹೀಗೆ ಸಾಗುತ್ತದೆ ದಾಸಪ್ಪನ ದಿನಚರಿ.
ಈಗ ಯೌವನದಲ್ಲಿರುವ ನಮ್ಮೂರು ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕಿನ ಬಹುತೇಕ ಎಲ್ಲರೂ ಈ ದಾಸಪ್ಪನ ಹಾಡುಗಳನ್ನು ತಿಂಗಳಿಗೊಮ್ಮೆ ಕೇಳುತ್ತಲೇ ಬೆಳೆದಿದ್ದಾರೆ. ದೇಹದ ಶಕ್ತಿಯಲ್ಲಿ ಸ್ವಲ್ಪ ಕುಂದಿದ್ದರೂ ಹಾಡುಗಳ ಶಕ್ತಿ ಇಳಿದಿಲ್ಲ. ದಾಸಪ್ಪ ಬಂದಾಗಲೊಮ್ಮೆ ಹಾಡನ್ನು ಕೇಳಿ ಮನೆಯಲ್ಲಿದ್ದನ್ನು ನೀಡಿ ಬೀಳ್ಕೊಡುವರೇ ಎಲ್ಲರು. ಹೊನ್ನಾಳಿಗರ ಬಾಯಲ್ಲಿ ‘ಪೀಯ್ಯಂಪೆಟ್ಟಿಗಿ’ ಅಂತಲೇ ಕರೆಸಿಕೊಳ್ಳುವ ನಾದದ ಅಕ್ಷಯಪಾತ್ರೆ ಹಾರ್‍ಮೋನಿಯಂ ಹಿಡಿದು ಊರೆಲ್ಲಾ ಸುತ್ತಿ ಬರುವ ಈ ದಾಸಪ್ಪ ಯಾರು ಅಂತ ಪ್ರಶ್ನೆ ಕೇಳಿಕೊಂಡವರು ಯಾರು ಇಲ್ಲವೇ ಇಲ್ಲವೆನ್ನುವಷ್ಟು ಕಡಿಮೆ.
ದಾಸಪ್ಪ ಬರೀ ದಾಸಪ್ಪನಲ್ಲ. ಎಲ್ಲರ ಬಾಯಲ್ಲಿ ದಾಸಪ್ಪನೆಂದು ಕರೆಸಿಕೊಂಡ ಇವರು ಒಂದು ಕಾಲದಲ್ಲಿ ಬಯಲುಸೀಮೆಯ ಖ್ಯಾತ ನಾಟಕ ಕಲಾವಿದ. ಹೊಸಕುಂದವಾಡದ ರಾಜರಾಜೇಶ್ವರಿ ನಾಟಕ ಮಂಡಳಿ ಎಂಬ ವೃತ್ತಿಪರ ನಾಟಕ ಕಂಪನಿಯ ವಿಜೃಂಬಣೆಯ ದಿನಗಳಲ್ಲಿ ತರತರದ ಪಾತ್ರ ನಿರ್ವಹಿಸಿ ಈಗ ಬೀದಿಗೆ ಬಿದ್ದಿರುವ ಈ ಕಲಾವಿದನ ನಿಜವಾದ ಹೆಸರು ಹನುಮಂತಪ್ಪ. ರಾಣೇಬೆನ್ನೂರು ಸಮೀಪದ ಹಳ್ಳೂರು ಸ್ವಸ್ಥಾನ. ನಿಜವಾದ ಹೆಸರು ಯಾರಿಗೂ ಪರಿಚಯವಿಲ್ಲ. ದಾಸಪ್ಪ ಅಂತಲೇ ಎಲ್ಲರ ಬಾಯಲ್ಲಿ.
ಜೀವನ ನಿರ್ವಹಣೆಗಾಗಿ ಬಿಕ್ಷುಕ ಪಾತ್ರ ದರಿಸಿದ್ದ ಈ ವ್ಯಕ್ತಿ ತನ್ನ ನಾಟಕದ ದಿನಗಳ ನೆನಪನ್ನು ಮನೆಗಳ ಮುಂದೆ ಹಾಡುಗಳಾಗಿ ಹರಿಸುತ್ತಾ ಸಾಗುತ್ತಿದ್ದರು.
‘ಕಬೀರ, ತುಕಾರಾಮ, ಸುಲೋಚನಾ, ಮಹಾಭಾರತ, ಸೇರ್‍ದಂಗೆ ಬಾಳ ನಾಟಕ ಮಾಡಿದ್ವಿ ಬಿಡ್ರಿ. ಮೈಲಾರ, ಚಂದ್ರಗುತ್ತಿ, ಎಲ್ಲೇ ಜಾತ್ರಿ ನಡೀಲಿ ನಮ್ ಕಂಪ್ನಿ ಅಲ್ಲಿರ್‍ತಿತ್ತು. ಆ ಕಾಲನೇ ಬ್ಯಾರಿತ್ತು. ನಾಟಕದ ಹುಚ್ಚಿಗ್ ಬಿದ್ದು ಎಲ್ಲೆಂದ್ರಲ್ಲಿ ಸುತ್ತಾಡಿದ್ವಿ.’
ಕೂರಿಸಿಕೊಂಡು ಕೇಳಿದಾಗ ಹಾಡುಗಳಂತೆ ದಾಸಪ್ಪನ ಮಾತುಗಳೂ ಹರಿಯುತ್ತವೆ.
‘ರೇಣುಕ ರಾಜ ಅಂತ ಒಂದ್ ನಾಟ್ಕ ಮಾಡಿದ್ವಿ. ಏನ್ ಜನ ಮೆಚ್ಚಿದ್ರು ಅಂದ್ರೆ ಹೇಳಬಾರ್‍ದು ಬಿಡ್ರಿ. ಅದೆಲ್ಲಾ ಈಗೆಲ್ಲಿ? ಒಂದ್ ದಿನ ಕಂಪನಿ ಮುಚ್ಚೋತು. ಎಲ್ಲಾ ಬೀದಿಗೆ ಬಿದ್ವಿ. ಕಲ್ತ ಪದ ಮೈಗೆ ಅಂಟ್ಕಂಡೇ ಇದ್ವು. ಅದೇ ಈಗ ಹೊಟ್ಟೆಪಾಡಾಗೇತಿ.’
ನಿಟ್ಟುಸಿರು ಬಿಟ್ಟ ದಾಸಪ್ಪ ಮುಂದೆ ಸಾಗುತ್ತಾರೆ.
ನಾಟ್ಕದೋರಿಗೆ ಅದೇನೋ ದುಡ್ಡು ಕೊಡ್ತಾರಂತೆ ಸರ್ಕಾರದೋರು ಅಂತಾ ಈ ಕಲಾವಿದ ಬರೆಯದ ಅರ್ಜಿಗಳಿಲ್ಲ. ಕಾಣದ ಅಧಿಕಾರಿ ಇಲ್ಲ. ಆದರೂ...‘ಅವರ ಹತ್ರಾನೂ ಬಿಕ್ಷೆ ಕೇಳ್ದಂಗೇ ಆತು’ ಎನ್ನುತ್ತಾರೆ. ನಾಟಕ ರಂಗದ ಮೇಲೆ ಪರಮೇಶ್ವರನ ಪಾತ್ರ ಹಾಕಿ ಮೆರೆದ ಹನುಮಂತಪ್ಪ ಈಗ ದಾಸಪ್ಪ.
ಈಗ ಅದರ ಉಸಾಬರಿನೇ ಬೇಡ ಅಂತಾ ದಾಸಪ್ಪ ಹಾಡುತ್ತಾ ಮುಂದೆ ಸಾಗುತ್ತಾರೆ.

ಯಾರಿಗೆ ಯಾರುಂಟು ಎರವಿನ ಸಂಸಾರ
ನೀರ ಮೇಗಳ ಗುಳ್ಳೆ ನಿಜವಲ್ಲ ಹರಿಯೇ
ನಿಜವಲ್ಲ ಹರಿಯೇ


ದಾಸಪ್ಪನ ಈ ‘ಪೀಯ್ಯಂಪೆಟ್ಗಿ’ ಹಾಡುತ್ತಲೇ ಇತ್ತು. ಇವತ್ತು ಈ ದಾಸಪ್ಪ ಎಲ್ಲಿದ್ದಾರೆ? ಈಗಿನ ಹುಡುಗರು ನಮ್ಮೂರಲ್ಲಿ ಇವರ ಹಾಡುಗಳನ್ನು ಕೇಳಿದ್ದಾರೆಯೇ?.

Tuesday, May 8, 2007

ಗುಣಮುಖ


ಇದು ಪಿ. ಲಂಕೇಶ್ ಅವರ ಗುಣಮುಖ ನಾಟಕದ ಒಂದು ಫೋಟೊ.... ಶಿವಮೊಗ್ಗದಲ್ಲಿ ಪ್ರದರ್ಶನ ಕಂಡಿತು.

ಮತ್ತದೆ ಬೇಸರ...

ಅದೇ ಸಂಜೆ
ಅದೇ ಏಕಾಂತ...
ನಿನ್ನ ಜೊತೆ ಇಲ್ಲದೆ
ಮಾತಿಲ್ಲದೆ ಮನ ವಿಭ್ರಾಂತ....

ನಿಸ್ಸಾರರ ಈ ಕವನ ಓದಿದಾಗಲೆಲ್ಲಾ ಸಂಜೆಯೂ ಆಲ್ಲದ, ರಾತ್ರಿಯೂ ಅಲ್ಲದ ಆ ಸಮಯ ನೆನಪಿಗೆ ಬರುತ್ತದೆ. ಸೂರ್ಯ ಮುಳುಗಿದ ನಂತರದ, ರಾತ್ರಿ ಆವರಿಸುವ ಮೊದಲಿನ ಆ ಸಮಯ. ಅದೊಂದು ಹಗಲು ಅಲ್ಲದ, ರಾತ್ರಿಯೂ ಅಲ್ಲದ ವಿಚಿತ್ರ ಕಾಲ. ನೆನಪುಗಳು ನುಗ್ಗಿ ಬರುವ ಸಂಕ್ರಮಣ ಸಮಯ.

ಇದೇ ದಾಟಿಯ, ಹಿಂದಿಯ ಬಹು ಜನಪ್ರಿಯ.... ಫಿರ್ ವಹಿ ಶಾಮ್... ವಹಿ ಗಂ... ವಹಿ ತನಹಾಯಿ.... ಇದು ನಿಮ್ಮನ್ನು ಕಾಡಿರಬಹುದು. ನೆನಪಿಸಿಕೊಳ್ಳಿ....