Saturday, May 3, 2008

ವಿಸ್ಮೃತಿಯಲ್ಲಿ ಆಧುನಿಕತೆ ಮುರಿಯಲೆತ್ನಿಸುವ ‘ಉಷಾಹರಣ’

ನೂರೈವತ್ತು ವರ್ಷಗಳ ಹಿಂದೆ ರಚಿತವಾದ ನಾಟಕವನ್ನು ಇಂದು ಹೇಗೆ ಪ್ರಸ್ತುತಪಡಿಸಬಹುದು?
ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಶೇಷಗಿರಿ ಎಂಬ ಹಳ್ಳಿಯ ಶೇಷಗಿರಿ ಕಲಾ ತಂಡ ಸಿದ್ಧಪಡಿಸಿರುವ ಶಾಂತ ಕವಿಗಳ ‘ಉಷಾಹರಣ’ ಎಂಬ ನಾಟಕ ಇದಕ್ಕೆ ಒಂದು ಉತ್ತಮ ನಿದರ್ಶನ.
ಮೇ ೧, ೨೦೦೮ರಂದು ಶಿವಮೊಗ್ಗದ ಕುವೆಂಪು ರಂಗಮಂದಿರದಲ್ಲಿ ಈ ನಾಟಕವನ್ನು ಸ್ಥಳೀಯ ಸಮುದಾಯ ತಂಡವು ಆಯೋಜಿಸಿತ್ತು.
ಶಿವಮೊಗ್ಗದ ಪ್ರೇಕ್ಷಕರು ಕೆಲ ದಿನಗಳ ಹಿಂದೆ ಇದೇ ಕಥೆಯನ್ನು ಹೊಂದಿದ್ದ ಮಹಿಳೆಯರೇ ಅಭಿನಯಿಸಿದ ‘ಉಷಾಪರಿಣಯ’ ಯಕ್ಷಗಾನ ಪ್ರಸಂಗವನ್ನು ನೋಡಿದ್ದರು. ಹಾಗಾಗಿ ಉಷಾಹರಣ ಕುತೂಹಲವನ್ನೂ ಕೆರಳಿಸಿತ್ತು.
ಉಷಾಹರಣ ನಾಟಕದಲ್ಲೂ ಸಹ ಯಕ್ಷಗಾನದ ಛಾಯೆ ಇದೆ. ನಿರ್ದೇಶಕ ಶ್ರೀಪಾದ ಭಟ್ ಅವರು ಸ್ವತಃ ಯಕ್ಷಗಾನ ಕಲಾವಿದರು. ಪಾತ್ರಗಳ ಆಗಮನ, ನಿರ್ಗಮನ, ಆಂಗೀಕಾಭಿನಯದಲ್ಲಿ ಯಕ್ಷಗಾನದ ಛಾಪು ಎದ್ದುಕಾಣುತ್ತಿತ್ತು.
ಬಾಣಾಸುರ ರಾಜನ ಮಗಳು ಉಷಾ ಕನಸಿನಲ್ಲಿ ಕಂಡ ಕೃಷ್ಣನ ಪುತ್ರ ಅನಿರುದ್ಧನನ್ನು ಮೋಹಿಸುತ್ತಾಳೆ. ಸಖಿ ಚಿತ್ರಲೇಖೆಯ ಸಹಾಯದಿಂದ ಆತನನ್ನು ತನ್ನ ಮಂದಿರಕ್ಕೆ ಕರೆತರುತ್ತಾಳೆ. ನಂತರ ಆಕೆ ಗರ್ಭಿಣಿಯಾದ ವಿಷಯ ಬಾಣಾಸುರನಿಗೆ ತಿಳಿದು ಅನಿರುದ್ಧನನ್ನು ಬಂಧಿಸುತ್ತಾನೆ. ವಿಷಯ ತಿಳಿದ ಕೃಷ್ಣ ಬಾಣಾಸುರನೊಂದಿಗೆ ಯುದ್ಧ ಮಾಡಿ ಆತನ ಬಾಹುಗಳನ್ನು ಕತ್ತರಿಸುತ್ತಾನೆ. ಕೊನೆಗೆ ಸುಖಾಂತ್ಯ. ಇಬ್ಬರ ಮದುವೆಯಾಗುತ್ತದೆ.
ಯುದ್ಧ ವಿರೋಧಿ ನಿಲುವು ಈ ನಾಟಕದಲ್ಲಿ ಕಾಣಸಿಗುವುದು ಬಾಣಾಸುರ ಕೃಷ್ಣರ ಸಂಘರ್ಷದಲ್ಲಿ ಮಾತ್ರ. ಬಾಣಾಸುರ ಆಯುಧಗಳಲ್ಲಿ ಬಂದೂಕೂ ಇದ್ದುದು ವಿಶೇಷ. ಆದರೆ ನಾಟಕ ನಿಜ ದ್ವನಿ ಇರುವುದು ಉಷಾ-ಅನಿರುದ್ಧರ ವಿರಹ-ಪ್ರೇಮ ದೃಶ್ಯಗಳಲ್ಲಿ.
ನಾಟಕದ ಇನ್ನೊಂದು ಗಮನಾರ್ಹ ಅಂಶ ಸಂಗೀತ. ಹಿಂದೂಸ್ತಾನಿ ಆಲಾಪಗಳು ಕೆಲವೊಮ್ಮೆ ರಂಗದ ಮೇಲಿನ ಚಟುವಟಿಕೆಯನ್ನೂ ಮೀರಿದರೂ ಸಹ ವೈಭವದ ಕಂಪವಿ ನಾಟಕದ ದಿನಗಳನ್ನು ನೆನಪಿಸಿತು. ಚಂಡೆಯ ಅಪಶೃತಿ ಕೆಲವೊಮ್ಮೆ ಕಿರಿಕಿರಿ ಮಾಡುತ್ತಿತ್ತು. ಗ್ರಾಮೀಣ ಮೂಲದಿಂದಲೇ ಬಂದ ಹಲವು ನಟರು ಅಚ್ಚುಕಟ್ಟಾಗಿ ಅಭಿನಯಿಸಿದರು.

ಶತಮಾನಗಳ ಹಿಂದಿನ ಈ ನಾಟಕ ವಿಳಂಬಿತ ಶೈಲಿಯಲ್ಲಿದೆ. ಅದನ್ನು ಅದೇ ರೀತಿ ನಿರ್ದೇಶಕರು ರಂಗದ ಮೇಲೆ ತಂದಿದ್ದಾರೆ. ‘ಆಧುನಿಕತೆಯನ್ನು ಮುರಿದು ಕಟ್ಟುವ’ ಹುಮ್ಮಸ್ಸಿನ ನಿರ್ದೇಶಕರು ಇದಕ್ಕಾಗಿ ಯಕ್ಷಗಾನದ ಸಹಕಾರ ಪಡೆದಿದ್ದಾರೆ. ಮರಳಿ ಬೇರಿನಡೆಗೆ ಸಾಗುವ ಯತ್ನದಲ್ಲಿ ತಕ್ಕಮಟ್ಟಿಗೆ ಯಶಸ್ವಿಯೂ ಆಗಿದ್ದಾರೆ. ಕೆಲವು ರಂಗ ಪರಿಕರಗಳು ಬಿ.ವಿ. ಕಾರಂತರ ನಾಟಕಗಳನ್ನು ನೆನಪಿಸುತ್ತಿದ್ದವು. ಬಳಸುವಲ್ಲಿ ನಿರ್ದೇಶಕರ ಸ್ವಂತಿಕೆ ಇತ್ತು.ಆದರೆ, ಎಲ್ಲ ಸಂದರ್ಭದಲ್ಲೂ ವಿಸ್ಮೃತಿಯೇ ಆಧುನಿಕತೆಗೆ ಉತ್ತರವೇ ಎನ್ನುವ ಪ್ರಶ್ನೆ ಹಾಗೇ ಉಳಿಯುತ್ತದೆ.