Tuesday, September 11, 2007

ಸಂಕೇತಗಳ ಭಾರಕ್ಕೆ ಕುಸಿಯದ ಮೀಡಿಯಾ


ಜಾಗತೀಕರಣಕ್ಕೆ ಸಂವಾದಿಯಾಗಿ ನಾಟಕವೊಂದು ನಿಲ್ಲಬಹುದೇ? ಇದಕ್ಕುತ್ತರ ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕು ತುಮರಿಯ ಕಿನ್ನರಮೇಳ ತಂಡ ಸಿದ್ಧಪಡಿಸಿರುವ ಯೂರಿಪಿಡೀಸ್‌ನ ‘ಮೀಡಿಯಾ’ ನಾಟಕದಲ್ಲಿದೆ.
ಜಾಗತೀಕರಣಕ್ಕೆ ಮುಖಾಮುಖಿಯಾಗಿ ಹಲವು ರಂಗಕೃತಿಗಳು ಬಂದುಹೋಗಿವೆ. ಇದಕ್ಕಾಗಿ ಹಲವು ಹೊಸ ಕೃತಿಗಳೂ ರಚನೆಯಾಗಿವೆ. ಆದರೆ ‘ಮೀಡಿಯಾ’ ನಾಟಕ ಉದಾರಿಕರಣದ ಪರಿಣಾಮಗಳ ಅತ್ಯಂತ ತುರ್ತು ಅಭಿವ್ಯಕ್ತಿಯಾಗಿ ಮೂಡಿಬಂದಿದೆ. ಗ್ರೀಕ್ ನಾಟಕಕಾರ ಯುರಿಪಿಡೀಸ್‌ನ ‘ಮೀಡಿಯಾ’ ರಂಗಭೂಮಿಯಲ್ಲಿ ಎಂದಿನಿಂದಲೂ ಬಹು ಚರ್ಚಿತ ನಾಟಕ. ಹಲವು ಸವಾಲುಗಳನ್ನು ಹೊಂದಿರುವ ಈ ಕೃತಿಯನ್ನು ಯಶಸ್ವಿಯಾಗಿ ರಂಗದ ಮೇಲೆ ತಂದ ತಂಡಗಳು ಕೆಲವೇ ಕೆಲವು. ಕನ್ನಡ ರಂಗಭೂಮಿಯಲ್ಲಂತೂ ಬೆರಳೆಣಿಕೆಯಷ್ಟು ಯಶಸ್ವಿ ಪ್ರದರ್ಶನಗಳಿವೆ.
ಹಿಂದೊಮ್ಮೆ ನೀನಾಸಂ ತಿರುಗಾಟಕ್ಕಾಗಿ ಬಿ.ವಿ. ಕಾರಂತರು ನಿರ್ದೇಶಿಸಿದ ಈ ನಾಟಕ ಕಾರಂತರ ಸಹಜ ಲಾಲಿತ್ಯವನ್ನೊಳಗೊಂಡು ಯಶಸ್ವಿ ಪ್ರದರ್ಶನವೆನಿಸಿತ್ತು. ಈಗ ತುಮರಿಯ ಕಿನ್ನರಮೇಳ ತಂಡವು ಈ ಕೃತಿಯ ಡಾ ಕೆ. ಮರುಳಸಿದ್ಧಪ್ಪನವರ ಅನುವಾದವನ್ನು ರಂಗದ ಮೇಲೆ ತಂದಿದೆ.
ಶಿವಮೊಗ್ಗದಲ್ಲಿ ಆಗಸ್ಟ್ ೨೨, ೨೦೦೭ರಂದು ಸಹ್ಯಾದ್ರಿ ರಂಗತರಂಗ ತಂಡವು ಡಿವಿಎಸ್ ರಂಗಮಂದಿರದಲ್ಲಿ ಈ ನಾಟಕವನ್ನು ಆಯೋಜಿಸಿತ್ತು.
ಕಾರಂತರು ಈ ನಾಟಕ ನಿರ್ದೇಶಿಸಿದ ಕಾಲ, ಇಂದಿನ ಕಾಲದ ನಡುವೆ ಹಲವು ಸ್ಥಿತ್ಯಂತರಗಳಿವೆ. ಇಂದೂ ಸಹ ಪ್ರಸ್ತುತವಾಗುವಂತೆ ನಿರ್ದೇಶಿಸುವುದು ಹೊಸ ಸವಾಲು. ಅದನ್ನು ಕಿನ್ನರ ಮೇಳದ ತಂಡ ಸಾಮ್‌ಕುಟ್ಟಿ ಪಟ್ಟಾಂಕರಿ ಅವರ ನಿರ್ದೇಶನದಲ್ಲಿ ಯಶಸ್ವಿಯಾಗಿ ನಿರ್ವಹಿಸಿದೆ ಎನ್ನುವುದೇ ಈ ಪ್ರಯೋಗದ ವಿಶೇಷ.
ಭಾವೋದ್ವೇಗದ ಹೆಣ್ಣು ಮೀಡಿಯಾ ತನಗೆ ದ್ರೋಹವೆಸಗಿ ಮರುಮದುವೆ ಮಾಡಿಕೊಂಡ ಗಂಡ ಜೇಸನ್, ಆತನ ನವವಧು, ಹಾಗೂ ಅವಳ ತಂದೆ ಕ್ರೆಯಾನನ ಮೇಲೆ ಸೇಡು ತೀರಿಸಿಕೊಂಡಿದ್ದರ ಕಥೆ.
ಕ್ರೆಯಾನ್ ಪಾತ್ರಧಾರಿ (ಕೆ.ಜಿ. ಕೃಷ್ಣಮೂರ್ತಿ) ಸೂಟುಬೂಟು ಧರಿಸಿ ರಾಜನಂತೆ ರಂಗ ಮೇಲೆ ಬರುವುದು, ಮೀಡಿಯಾ ಮಕ್ಕಳಿಗೆ ಏಜಿಯಸ್ (ರಘುರಾಮ) ‘ಅಮೇರಿಕಾ ಧೀಕ್ಷೆ’ ನೀಡುವುದು, ಅದಕ್ಕಾಗಿ ಪೆಪ್ಸಿ ಬಾಟಲಿ ಬಳಸುವುದು, ದೂತ ‘ಮೀಡಿಯಾ....’ ಎಂದು ಕೂಗಿದಾಗ ಪತ್ರಕರ್ತರು, ಟೀವಿ ಪತ್ರಕರ್ತರು ರಂಗದ ಮೇಲೆ ಬರುವುದು.. ಇತ್ಯಾದಿ ಇಂಟರ್ಪ್ರಿಟೇಶನ್‌ಗಳು ನಾಟಕವನ್ನು ಇಂದಿನ ಕಾಲಕ್ಕೆ ತರುತ್ತದೆ.
ಮೀಡಿಯಾ ತನ್ನ ನೋವನ್ನು ಅಭಿವ್ಯಕ್ತಿಸುವಾಗ ಅದನ್ನು ಅಲಕ್ಷಿಸಿ ನಿಂತ ಕ್ರೆಯಾನ್ ಅವಳ ಮೇಲೆಯೇ ಅನುಮಾನ ಪಡುತ್ತಾನೆ. ಆಗ ಮೀಡಿಯಾ ರಾಜ್ಯವನ್ನು ಬಿಟ್ಟು ಹೊರಹೋಗಲು ನಿರ್ಧರಿಸುತ್ತಾಳೆ. ತನ್ನ ಮಕ್ಕಳ ಮೇಲೆ ಯಾವ ಕಷ್ಟವೂ ಬರದಿರಲಿ ಎಂದು ಅವರನ್ನೇ ಕೊಲ್ಲುತ್ತಾಳೆ. ಮೀಡಿಯಾಳ ಭಾವೋದ್ವೇಗ, ಆಕ್ರೋಶ, ಆತಂಕಗಳನ್ನು ಸುಶೀಲಾ ಕೆಳಮನೆ ಅತ್ಯಂತ ಸಮರ್ಥವಾಗಿ ಹಿಡಿದಿಟ್ಟರು.
ರಂಗಸಜ್ಜಿಕೆ ಸರಳವಾಗಿ ಕಂಡರೂ ಇದ್ದೊಂದೇ ಪುಟ್ಟ ವೇದಿಕೆಯನ್ನು ವಿವಿಧ ರೀತಿಯಲ್ಲಿ ಬಳಸಿಕೊಂಡ ರೀತಿ ಅದ್ಭುತ. ಪಾತ್ರಗಳ ಪ್ರವೇಶ, ನಿರ್ಗಮನ ಸಂದರ್ಭದಲ್ಲಿ ಸಂಯೋಜಿಸಿದ ನೃತ್ಯ-ಸಂಗೀತ ರಂಗಕ್ಕೆ ತಕ್ಕಂಥ ವಾತಾವರಣ ನಿರ್ಮಿಸಿತು.
ಮೊದಲಿನಿಂದ ಕೊನೆಯ ವರೆಗೂ ಜಾಗತೀಕರಣದ ಸಂಕೇತಗಳು ರಂಗದ ಮೇಲೆ ಬರುತ್ತಲೇ ಇದ್ದವು. ಸಂಕೇತಗಳ ಭಾರಕ್ಕೆ ನಾಟಕ ಕುಸಿಯದೇ ಉಳಿದಿದ್ದೇ ಪ್ರಯೋಗದ ಸಾರ್ಥಕತೆಯಾಗಿತ್ತು.

1 comment:

jomon varghese said...

ಕನ್ನಡ ರಂಗಭೂಮಿಯಲ್ಲಿ ಬೆರಳೆಣಿಕೆಯಷ್ಟು ಯಶಸ್ವಿ ಪ್ರದರ್ಶನಗಳು ನಡೆಯುತ್ತಿದೆ.ಅದರಲ್ಲಿ ಈ ನಾಟಕವೂ ಒಂದು ಎನ್ನಬಹುದು. ಚೆನ್ನಾಗಿದೆ..